ಬ್ಲ್ಯಾಕ್ಸ್ಟೋನ್, ವಿಲಿಯಮ್

ಬ್ಲ್ಯಾಕ್‍ಸ್ಟೋನ್, ವಿಲಿಯಮ್
	1723-1780 ಇಂಗ್ಲೆಂಡಿನ ಪ್ರಸಿದ್ಧ ನ್ಯಾಯಶಾಸ್ತ್ರಜ್ಞ, ಪಾರ್ಲಿಮೆಂಟ್ ಸದಸ್ಯ, ವಿಶ್ವವಿದ್ಯಾಲಯ ಆಡಳಿತಗಾರ. 1723 ಜುಲೈ 10ರಂದು ಲಂಡನ್ನಿನ ಚೀಪ್‍ಸೈಡ್‍ನಲ್ಲಿ ಹುಟ್ಟಿದ. ತಂದೆ ರೇಷ್ಮೆ ವರ್ತಕ ಚಾರ್ಲಸ್ ಬ್ಲ್ಯಾಕ್‍ಸ್ಟೋನ್, ಮಗ ಹುಟ್ಟುವುದಕ್ಕೆ ಮುಂಚೆಯೇ ಈತ ತೀರಿಕೊಂಡಿದ್ದ. ಇವನ ವಯಸ್ಸು ಹನ್ನೆರಡಾಗಿದ್ದಾಗ ತಾಯಿಯೂ ತೀರಿಕೊಡಳು. ಬ್ಲ್ಯಾಕ್‍ಸ್ಟೋನನಿಗೆ ಶಿಕ್ಷಣ ಕೊಡಿಸಿದವನು ಇವನ ಕಕ್ಕ, ಲಂಡನ್ನಿನ ಶಸ್ತ್ರಚಿಕಿತ್ಸಕ ತಾಮಸ್‍ಬಿಗ್. 1730ರಿಂದ 1738ರ ತನಕ ಚಾರ್ಟರ್ ಹೌಸಿನಲ್ಲೂ ಅನಂತರ ಆಕ್ಸ್‍ಫರ್ಡಿನ ಪೆಂಬ್ರೋಕ್ ಕಾಲೇಜಿನಲ್ಲೂ ಈತ ಶಿಕ್ಷಣ ಪಡೆದು 1741ರಲ್ಲಿ ನ್ಯಾಯಶಾಸ್ತ್ರಾಭ್ಯಾಸಕ್ಕಾಗಿ ಮಿಡ್ಲ್ ಸೇರಿದ. 1743ರಲ್ಲಿ ಆಲ್ ಸೋಲ್ಸ್ ಕಾಲೇಜಿನ ಸದಸ್ಯನಾಗಿ ಇವನ ಆಯ್ಕೆಯಾಯಿತು. 1746ರಲ್ಲಿ ಇವನಿಗೆ ಹೇಳಿಕೊಳ್ಳುವಂಥ ಯಶಸ್ಸು ದೊರೆಯಲಿಲ್ಲ. 1743ರಲ್ಲಿ ಈತ ಎಲಿಮೆಂಟ್ಸ್ ಆಫ್ ಆರ್ಕಿಟೆಕ್ಚರ್ ಎಂಬ ಕೃತಿಯನ್ನು ಬರೆದು, 1746 ಮತ್ತು 1747ರಲ್ಲಿ ಅದನ್ನು ಪರಿಷ್ಕರಿಸಿ ವಿಸ್ತರಿಸಿದ. 1749ರಲ್ಲಿ ವಾಲಿಂಗ್‍ಫೋರ್ಡಿನ ರಿರ್ಕರ್ಡರ್ ಆಗಿಯೂ 1751ರಲ್ಲಿ ಚಾನ್ಸೆಲರ್ ನ್ಯಾಯಾಲಯದ ಅಧಿಪತಿಯ ಸಹಾಯಕನಾಗಿಯೂ ಇವನು ನೇಮಕಹೊಂದಿದ. 1750ರಲ್ಲಿ ಇವನಿಗೆ ಡಾಕ್ಟರ್ ಆಫ್ ಸಿವಿಲ್ ಲಾ ಪದವಿ ದೊರಕಿತು. 1753ರಲ್ಲಿ ಇವನು ವೃತ್ತಿಯನ್ನು ತ್ಯಜಿಸಿ ಸಂಪ್ರದಾಯ ನ್ಯಾಯದಲ್ಲಿ ವಿಶೇಷ ಆಸಕ್ತಿ ತಳೆದು ಆ ವಿಷಯದಲ್ಲಿ ಪಾಠ ಹೇಳಲಾರಂಭಿಸಿದ. ವಿಶ್ವ ವಿದ್ಯಾಲಯವೊಂದರಲ್ಲಿ ಆಂಗ್ಲ ನ್ಯಾಯದ ಬೇಲ್ ಉಪನ್ಯಾಸಗಳನ್ನಿತ್ತವರಲ್ಲಿ ಇವನೇ ಮೊದಲಿಗ. ತಾನು ನೀಡಿದ ಉಪನ್ಯಾಸಗಳ ಸಾರಾಂಶವಾಗಿ ಅನ್ ಅನಾಲಿಸಿಸ್ ಆಫ್ ದಿ ಲಾಸ್ ಇಂಗ್ಲೆಂಡ್ ಎಂಬ ಕೃತಿಯನ್ನು ವಿದ್ಯಾಥಿರ್üಗಳ ಮಾರ್ಗದರ್ಶನಕ್ಕಾಗಿ 1758ರಲ್ಲಿ ಪ್ರಕಟಿಸಿದ. 1765-69 ಅವಧಿಯಲ್ಲಿ ಕಾಮೆಂಟರೀಸ್ ಎಂಬ ಗ್ರಂಥ ಹಲವು ಸಂಪುಟಗಳಲ್ಲಿ ಪ್ರಕಟವಾಯಿತು ಆಕ್ಸ್‍ಫರ್ಡಿನ ವಿಶ್ವವಿದ್ಯಾಲಯ ಮುದ್ರಣಾಲಯದ ನಿಯೋಗಿಯಾಗಿ ಈತ ಅದರಲ್ಲಿ ಸುಧಾರಣೆಗಳನ್ನು ತಂದ. ಇವನ ಮ್ಯಾಗ್ನಕಾರ್ಟ ಮತ್ತು ದಿ ಚಾರ್ಟರ್ ಆಫ್ ದಿ ಫಾರೆಸ್ಟ್ ಮುದ್ರಣಗಳು ಸುಧಾರಿತ ಮುದ್ರಣಕಲೆಯ ನಿದರ್ಶನಗಳು. ಇದರ ಫಲವಾಗಿ ಸೊಸೈಟಿ ಆಫ್ ಆ್ಯಂಟಿಕ್ವರೀಸ್ ಎಂಬ ಸಂಘದ ಫೆಲೊ ಆಗಿ ಈತ ಚುನಾಯಿತನಾದ. 1758ರಲ್ಲಿ ಸಾಮಾನ್ಯ ನ್ಯಾಯದ ಪ್ರಥಮ ವಿನೇರಿಯನ್ ಪ್ರಾಧ್ಯಾಪಕನಾಗಿ ಆಯ್ಕೆಹೊಂದಿದ. ಇವನ ಉಪನ್ಯಾಸಗಳು ಇಂಗ್ಲಿಷ್ ನ್ಯಾಯದ ಮೇಲಿನ ಭಾಷ್ಯಗಳಂತಿದ್ದುವು. ಇವನು ಮತ್ತೆ ನ್ಯಾಯವಾದಿ ವೃತ್ತಿ ಮತ್ತು ಸಾರ್ವಜನಿಕ ಜೀವನದತ್ತ ಆಕರ್ಷಿತನಾದ. 1761-68ರಲ್ಲಿ ಹಿಂಡನ್ನಿನ ಮತ್ತು 1768-70ರಲ್ಲಿ ವೆಸ್ಟ್ ಬರಿಯ ಪ್ರತಿನಿಧಿಯಾಗಿ ಇವನು ಪಾರ್ಲಿಮೆಂಟ್ ಸದಸ್ಯನಾಗಿದ್ದ. ರಾಜಕಾರಣದಲ್ಲಿ ಇವನಿಗೆ ಅಷ್ಷೇನೂ ಯಶಸ್ಸು ಲಭಿಸಲಿಲ್ಲ. ಪಾರ್ಲಿಮೆಂಟಿನಲ್ಲಿ ಇವನ ಭಾಷಣಗಳು ಹೆಚ್ಚಾಗಿ ಕಾನೂನು ಮತ್ತು ಸಂವಿಧಾನದ ಪ್ರಶ್ನೆಗಳಿಗೆ ಸಂಬಂಧಿಸಿದವಾಗಿದ್ದುವು. 1770ರಲ್ಲಿ ಸಿವಿಲ್ ವ್ಯಾಜ್ಯಗಳ ನ್ಯಾಯಾಧೀಶನೆಂದು ಇವನು ನೇಮಕ ಹೊಂದಿದ. ಆ ಸ್ಥಾನದಲ್ಲಿಯೂ ಇವನು ವಿಶೇಷ ಬೆಳಗಲಿಲ್ಲ. ಅದೇ ವರ್ಷ ಇವನಿಗೆ ನೈಟ್ ಪದವಿಯನ್ನು ಪ್ರಧಾನಿಸಲಾಯಿತು. ಇವನಿಗೆ ಮುಖ್ಯವಾಗಿ ಪ್ರಸಿದ್ಧಿಯನ್ನು ತಂದ ಕೃತಿಯೆಂದರೆ 1763-69ರ ನಡುವೆ ನಾಲ್ಕು ಸಂಪುಟಗಳಲ್ಲಿ ಇವನು ಪ್ರಕಟಿಸಿದ ಕಾಮೆಂಟರೀಸ್ ಅದು ಮುಂದೆ ಒಂದು ಶತಮಾನಕಾಲ ನ್ಯಾಯವಾದಿಗಳಿಗೆ ಅತ್ಯವಶ್ಯವಾದ ಪಠ್ಯಪುಸ್ತಕವಾಗಿತ್ತು. ಅಮೆರಿಕಗಳಲ್ಲಿ ಮತ್ತು ಬ್ರಿಟಿಷ್ ವಸಾಹತುಗಳಲ್ಲಿ ಇಂಗ್ಲಿಷ್ ನ್ಯಾಯದ ಪ್ರಧಾನ ಭಾಗಕ್ಕೆ ಅದು ಮಾದರಿಯಾಗಿಯೂ ಇತ್ತು. ಸ್ವಾರಸ್ಯವಾದ ಶೈಲಿಯಲ್ಲಿರುವ ಆ ಕೃತಿ ಇಂಗ್ಲಿಷ್ ನ್ಯಾಯದ ತಿಳಿಯಾದ ಮತ್ತು ಸಮಗ್ರವಾದ ಸ್ವರೂಪವನ್ನು ಮೊದಲು ಬಾರಿಗೆ ಒದಗಿಸಿತು.

	1780 ಫೆಬ್ರವರಿ 14ರಂದು ಇವನು ತೀರಿಕೊಂಡ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ